ಯಾಕೆ ನಿರ್ದಯನಾದೆ ಎಲೆ ದೇವನೆ
ರಾಗ: ಕಾಂಬೋದಿ     ತಾಳ: ಝಂಪೆ
ಯಾಕೆ ನಿರ್ದಯನಾದೆ ಎಲೊ ದೇವನೆ
ಶ್ರೀಕಾಂತ ಎನಮೇಲೆ ಎಳ್ಳಷ್ಟು ದಯವಿಲ್ಲ || ಪ||

ಕಂಗೆಟ್ಟು ಕಂಭದಲಿ ಒಡೆದು ಬಳಲಿ ಬಂದು
ಹಿಂಗದೆ ಪ್ರಹ್ಲಾದನಪ್ಪಿಕೊಂಡೆ
ಮಂಗಳ ಪದವಿತ್ತು ಮನ್ನಿಸಿದೆ ಅವ ನಿನಗೆ
ಭಂಗಾರವೆಷ್ಟು ಕೊಟ್ಟನು ಪೇಳೊ ಹರಿಯೆ || ೧|| -ಯಾಕೆ ನಿರ್ದಯನಾದೆ ಎಲೊ ದೇವನೆ

ಸಿರಿದೇವಿಗೆ ಹೇಳದೆ ಸೆರಗು ಸಂವರಿಸದೆ
ಗರುಡನ ಮೇಲೆ ಗಮನವಾಗದೆ
ಭರದಿಂದ ನೀ ಬಂದು ಕರಿಯನುದ್ಧರಿಸಿದೆ
ಕರಿರಾಜ ಎಷ್ಟು ಕನಕವ ಕೊಟ್ಟ ಹರಿಯೆ || ೨ || -ಯಾಕೆ ನಿರ್ದಯನಾದೆ ಎಲೊ ದೇವನೆ

ಅಜಮಿಳನು ಅಣ್ಣನೆ ವಿಭೀಷಣನು ತಮ್ಮನೆ
ನಿಜದಿ ರುಕ್ಮಾಂಗದನು ನಿನ್ನ ಮೊಮ್ಮಗನೇ
ಭಜನೆಗವರೇ ಹಿತರೆ ನಾ ನಿನಗೆ ಅನ್ಯನೆ
ತ್ರಿಜಗಪತಿ ಸಲಹೆನ್ನ ಪುರಂದರವಿಠಲ  || ೩ || - ಯಾಕೆ ನಿರ್ದಯನಾದೆ ಎಲೊ ದೇವನೆದಾಸವಾಣಿ
ರಚನೆ: ಪುರಂದರದಾಸರು.

ನೋಡಿ
ಪುರಂದರದಾಸರ ಸಾಹಿತ್ಯ
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪುರಂದರದಾಸರು
ಪರಿವಿಡಿ

ಉಲ್ಲೇಖ

ವರ್ಗ: ಪುರಂದರದಾಸ ಸಾಹಿತ್ಯ
ವರ್ಗ: ದಾಸ ಸಾಹಿತ್ಯ